ಸೌಲಭ್ಯಗಳು

Home

ಸವಲತ್ತುಗಳು :

ಗ್ರಂಥಾಲಯ: ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗಾಗಿ ಸುಮಾರು 3000 ಪುಸ್ತಕಗಳು ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಮ್ಯಾಗಜೀನ್ ಗಳನ್ನೊಳಗೊಂಡ ಚಿಕ್ಕ ಗ್ರಂಥಾಲಯ ಲಭ್ಯವಿದೆ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲೇ ಈ ಪುಸ್ತಕಗಳನ್ನು ಓದಬಹುದು. ಎರವಲು ಪಡೆಯುವ ವ್ಯವಸ್ಥೆ ಸದ್ಯಕ್ಕಿಲ್ಲ.

ದೂರದರ್ಶಕ: ತಾರಾಲಯದ ವೀಕ್ಷಣಾಲಯವು ಕಾರ್ಲ್ ಝೈಸ್ ಕಂಪನಿಯ 6” ವಿವರ್ತನ ದೂರದರ್ಶಕವನ್ನು ಹೊಂದಿದೆ. ವೀಕ್ಷಕನ ಸ್ಥಾನವು ಸ್ಥಿರವಾಗಿರುವ ದೂರದರ್ಶಕದಲ್ಲಿ ಟ್ರ್ಯಾಕಿಂಗ್ ವ್ಯವಸ್ಥೆಯೂ ಲಭ್ಯವಿದೆ. ಇದು ಭೂಮಿಯ ವರ್ತನೆಯಿಂದಾಗಿ ಆಕಾಶಕಾಯಗಳಲ್ಲಾಗುವ ತೋರಿಕೆಯ ಚಲನೆಯನ್ನು ಸರಿದೂಗಿಸಿ ದೂರದರ್ಶಕದ ಫೀಲ್ಡ್ ಆಫ್ ಮ್ಯಾ ನಲ್ಲಿರುವ ಕಾಯವನ್ನು ಸುದೀರ್ಘ ಸಮಯ ವೀಕ್ಷಿಸಲು ಅನುವು ಮಾಡುತ್ತದೆ.

ಸ್ಪೆಕ್ಟ್ರೊಸ್ಕೊಪಿ ಹಾಗೂ ಸಿಸಿಡಿ ಇಮೇಜಿಂಗ್ ಗಳ ಮೂಲಕ ಆಕಾಶಕಾಯಗಳ ಅಧ್ಯಯನ ಮಾಡುವುದೂ ಇಲ್ಲಿ ಸಾಧ್ಯವಿದೆ. ಖಗೋಳಶಾಸ್ತ್ರದ ವಿದ್ಯಾರ್ಥಿಗಳಿಗೆ ಈ ವೀಕ್ಷಣಾಲಯವು ಬಹು ಉಪಯುಕ್ತವಾಗಿದೆ.

ಗ್ರಹಣ, ಸಂಕ್ರಮಣ, ಯುತಿ ಮುಂತಾದ ಖಗೋಳೀಯ ಘಟನೆಗಳ ಸಂದರ್ಭದಲ್ಲಿ ಮಾತ್ರವಲ್ಲದೇ ಸೌರಕಲೆಗಳ ಅಧ್ಯಯನದ ಮೂಲಕ ಸೂರ್ಯನ ಆವರ್ತನಾ ಅವಧಿ ತಿಳಿಯುವುದು, ಸೂರ್ಯನ ಕೋನೀಯ ಗಾತ್ರ ತಿಳಿಯುವುದು. ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಲ್ಲೂ ಈ ವೀಕ್ಷಣಾಲಯ ಉಪಯುಕ್ತವಾಗಿದೆ.

ಪ್ರಯೋಗಾಲಯ: ವಿದ್ಯಾರ್ಥಿಗಳಿಗಾಗಿ ಹಾಗೂ ಶಿಕ್ಷಕರಿಗಾಗಿ ರೂಪಿಸುವ ತಾರಾಲಯದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಪ್ರಯೋಗಗಳ ಮೂಲಕ ವೈಜ್ಞಾನಿಕ ತತ್ವಗಳನ್ನು ಅರ್ಥೈಸಿಕೊಳ್ಳುವ ವಿಧಾನಕ್ಕೆ ಮಹತ್ವದ ಪಾತ್ರವಿದೆ.

ಪ್ರಯೋಗದ ನಿದರ್ಶನದಿಂದ ವೈಜ್ಞಾನಿಕ ವಿದ್ಯಮಾನದ ಪರಿಚಯ ಮಾತ್ರ. ವಿದ್ಯಮಾನದ ಸಂಪೂರ್ಣ ಅರಿವು ಮೂಡುವುದು ಕ್ರಮಬದ್ಧವಾಗಿ ಮಾಪನಗಳನ್ನು ಮಾಡಿದಾಗ ಮಾತ್ರವೇ. ಈ ರೀತಿಯ ಮಾಪನಗಳನ್ನು ಮಾಡುವುದು, ಬಂದ ಫಲಿತಾಂಶಗಳನ್ನು ವಿಶ್ಲೇಷಿಸುವುದು ವೈಜ್ಞಾನಿಕ ಚಿಂತನೆಯ ಬಹು ಮುಖ್ಯ ಅಂಗವಾಗಿದೆ.

ತಾರಾಲಯದ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಸೃಜನಾತ್ಮಕವಾಗಿ, ವಿನೂತನವಾಗಿ ಚಿಂತಿಸಿ, ಕ್ರಮಬದ್ಧವಾಗಿ ಪ್ರಯೋಗಗಳನ್ನು ಮಾಡಲು ಅವಕಾಶವಿದೆ. ಭೌತಶಾಸ್ತ್ರ, ಗಣಿತ ಮತ್ತು ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಅಗತ್ಯ ಪರಿಕರಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಈ ವಿಷಯಗಳಿಗೆ ಸಂಬಂಧಿಸಿದ ಮುಲಭೂತ ವಿಚಾರಗಳ ಕುರಿತ ತಮ್ಮ ಪ್ರಶ್ನೆಗಳು ಹಾಗೂ ಸಮಸ್ಯೆಗಳನ್ನು ಪ್ರಯೋಗಗಳ ಮೂಲಕ ಬಗೆಹರಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ಈ ಮೂಲಕ ವಿದ್ಯಾರ್ಥಿಗಳು ವಿಷಯಕ್ಕೆ ಸಂಬಂಧಿಸಿದ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಪ್ರಯೋಗಕ್ಕೆ ಎಡೆ ಮಾಡುವ ವೈಜ್ಞಾನಿಕ ಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರೇ ಖುದ್ದಾಗಿ ಪ್ರಯೋಗಗಳನ್ನು ರೂಪಿಸಿ, ಮಾಪನಗಳನ್ನು ಮಾಡಿ ಉತ್ತರ ಕಂಡುಕೊಳ್ಳುವಂತೆ ಮಾಡುವುದು ನಮ್ಮ ಕಲಿಕಾ ವಿಧಾನವಾಗಿದೆ.

ದ್ಯುತಿವಿಜ್ಞಾನ, ಚಲನಶಾಸ್ತ್ರ, ಶಬ್ದ, ವಿದ್ಯುಚ್ಛಕ್ತಿ ಮತ್ತು ಕಾಂತೀಯತೆ ಇವೇ ಮೊದಲಾದ ವಿಷಯಗಳ ಕುರಿತು ಪ್ರಯೋಗಗಳನ್ನು ಕೈಗೊಳ್ಳಲು ಇಲ್ಲಿ ಅವಕಾವಿದೆ.

ಶಾಲಾ ಪಠ್ಯಕ್ಕೆ ಪೂರಕವಾದಂತಹ ಪ್ರಯೋಗಗಳನ್ನೂ ನಮ್ಮ ಈ ಪ್ರಯೋಗಾಲಯದಲ್ಲಿ ಕೈಗೊಳ್ಳಲಾಗುವುದು.

×
ABOUT DULT ORGANISATIONAL STRUCTURE PROJECTS